ಜರೀಗಿಡಗಳು -
ಟೆರಿಡೋಫೈಟ ವಿಭಾಗ, ಫಿಲಿಸಿನೀ ವರ್ಗದ ಇವುಗಳ ಹಲವಾರು ಕುಟುಂಬಗಳಿಗೆ ಸೇರಿದ ನಿಮ್ನರೀತಿಯ ನಾಳೀಯ ಸಸ್ಯಗಳು (ಫರ್ನ್ಸ್). ಹೂ ಬಿಡದ ಗಿಡಗಳಾದ ಇವು ಸಾಮಾನ್ಯವಾಗಿ ತೇವಯುತವಾದ ನೆರಳು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಇಂಡೋಮಲಯ ಪ್ರಾಂತಗಳಲ್ಲಿಯೂ ಪೆಸಿಫಿಕ್ ಸಾಗರದ ದಕ್ಷಿಣ ಪ್ರದೇಶಗಳಲ್ಲಿಯೂ ಇವುಗಳ ಸಂಖ್ಯೆ ಅಪಾರ. ಪ್ರಪಂಚಾದ್ಯಂತ ಸುಮಾರು 300ಕ್ಕೂ ಹೆಚ್ಚು ಜಾತಿಗಳು 6,000ಕ್ಕೂ ಹೆಚ್ಚು ಪ್ರಭೇದಗಳು ಇವೆ. ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಪ್ರಭೇದಗಳು ಇವೆ. ಎಂದು ಬೆಡೋಮ್ ಎಂಬ ವಿಜ್ಞಾನಿ ಅಂದಾಜುಮಾಡಿದ್ದಾನೆ.

ಇವುಗಳ ಗಾತ್ರ, ಆಕಾರ, ಎಲೆಗಳ ಆಕಾರ, ಸ್ವಾಭಾವಿಕ ಬೆಳೆವಣಿಗೆ ಮುಂತಾದ ಲಕ್ಷಣಗಳಲ್ಲಿ ವೈವಿಧ್ಯ ಉಂಟು. ಹಾಗೆಯೇ ಇವು ಬೆಳೆಯುವ ನೆಲೆಗಳಲ್ಲೂ ಭಿನ್ನತೆ ಇದೆ. ಹೈಮಿನೋಫಿಲ್ಲಮ್, ಡ್ರೈಅಪ್ಟರಿಸ್, ಮುಂತಾದವು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆದರೆ ಟೆರಿಡಿಯಮ್, ಆಕ್ವಿಲಿನಿಯಮ್, ಗ್ಲೈಕೀನಿಯ ಮುಂತಾದವು ಬಿಸಿಲು ಹೆಚ್ಚಾಗಿರುವ ಜಾಗಗಳಲ್ಲಿ ಬೆಳೆಯುತ್ತವೆ. ಅeóÉೂೀಲ, ಸಾಲ್ವೀನಿಯ, ಮಾರ್ಸಿಲೀಯ, ಪೈಲುಲೇರಿಯ, ರೆಗ್ನೆಲಿಡಿಯಮ್ ಮುಂತಾದವು ಜಲವಾಸಿಗಳು. ಅನೇಕ ಜರೀಗಿಡಗಳು ಮಳೆಗಾಲದಲ್ಲಿ ಚೆನ್ನಾಗಿ ಬೆಳೆಯುತ್ತಿದ್ದು ತೇವಾಂಶ ಆರುತ್ತ ಬಂದಂತೆ ಒಣಗಿ ಹೋಗುತ್ತವೆ. ಕೆಲವು ಕಲ್ಲುಬಂಡೆಗಳ ಮೇಲೆ ಬೆಳೆಯುತ್ತವೆ. ಮತ್ತೆ ಕೆಲವು ಮರಗಳ ತೊಗಟೆಗಳ ಸಂದಿಗಳಲ್ಲಿ ಬೆಳೆಯುತ್ತವೆ.

ಜರೀಗಿಡಗಳಲ್ಲಿ ಕೆಲವು ಅತಿ ಪುಟ್ಟವು. ಅಂದರೆ ಕೇವಲ ಕೆಲವೇ ಮಿಮೀ. ಉದ್ದ ಇರುತ್ತವೆ. ಉದಾಹರಣೆಗೆ ಅeóÉೂಲ, ಇನ್ನು ಕೆಲವು 8-15 ಮೀ. ಎತ್ತರದ ಮರಗಳಾಗಿ ಬೆಳೆಯುತ್ತವೆ. ಇವಕ್ಕೆ ವೃಕ್ಷ ಜರೀಸಸ್ಯಗಳೆಂದು (ಟ್ರೀಫನ್ರ್ಸ್) ಹೆಸರು. ಉದಾಹರಣೆಗೆ ಸಯಾತಿಯ. ಅದರೆ ಬಹುಮಟ್ಟಿನ ಜರೀಗಿಡಗಳು ಪೊದೆ ಸಸ್ಯಗಳು.

ಜರೀಗಿಡಗಳ ಎಲೆಗಳು ವಿವಿಧಾಕಾರವಾಗಿರುವುದರಿಂದ ಇವನ್ನು ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಇವಕ್ಕೆ ಬೇರೆ ರೀತಿಯ ಬಳಕೆಗಳೂ ಉಂಟು. ಆಸ್ಪ್ಲೀನಿಯಮ್ ಎಸ್ಕುಲೆಂಟಮ್, ನೆಫ್ರೋಡಿಯ ಈರಿಯೋಕಾರ್ಪಮ್, ಬಾಟ್ರಿಕಿಯಮ್ ಪರ್ಜಿನಿನಮ್ ಮುಂತಾದ ಗಿಡಗಳನ್ನು ಆಹಾರಕ್ಕಾಗಿ ಹಿಮಾಲಯದ ಗುಡ್ಡಗಾಡಿನ ಜನ ಉಪಯೋಗಿಸುತ್ತಾರೆ. ನ್ಯೂಜಿûೀಲೇಂಡಿನಲ್ಲಿ ಆಲ್ಸೊಫೈಲ ಮತ್ತು ಸಯಾತಿಯ ಮುಂತಾದವುಗಳಿಂದ ಬೆಂಡನ್ನೂ ಬೇರ್ಪಡಿಸಿ ಆಹಾರಕ್ಕಾಗಿ ಬಳಸುವುದುಂಟು. ಆಲ್ಸೊಫೈಲ ಲಾಟಿಬ್ರೋಸವನ್ನು ಸಿಕ್ಕಿಂನಲ್ಲಿ ಆಹಾರಕ್ಕಾಗಿ ಉಪಯೋಗಿಸುವುದಿದೆ. ಅಡಿಯಾಂಟಮ್ ವೆನುಸ್ಟಮ್, ಆಕ್ಟಿನಿಯಾಪ್ಟರಿಸ್ ಡೈಕಾಟೊಮ. ಆಸ್ಪ್ಲೀನಿಯಮ್ ಫಿಂಬ್ರಿಯೇಟಮ್ ಮುಂತಾದವಕ್ಕೆ ಔಷಧೀಯ ಪ್ರಾಮುಖ್ಯ ಉಂಟು.

ಜರೀಗಿಡಗಳು ಸ್ಪೋರೋಫೈಟುಗಳು. ಇವು ಸಂತಾನೋತ್ಪತ್ತಿಗಾಗಿ ಎಲೆಗಳಲ್ಲಿ ಸ್ಪೋರ್ಯಾಂಜಿಯಗಳನ್ನು ಉತ್ಪತ್ತಿಮಾಡುತ್ತವೆ. ಇವುಗಳಲ್ಲಿ ಬೀಜಾಣುಗಳು (ಸ್ಪೋರ್ಸ್) ಉತ್ಪತ್ತಿಯಾಗುತ್ತವೆ. ಸ್ಪೋರುಗಳು ಪ್ರಸಾರವಾಗಿ ಸೂಕ್ತ ಸ್ಥಳಗಳಲ್ಲಿ ಬಿದ್ದಾಗ ಗ್ಯಾಮಿಟೊಫೈಟುಗಳಾಗಿ ಮೊಳೆಯುತ್ತವೆ. ಗ್ಯಾಮಿಟೊಫೈಟುಗಳಿಗೆ ಪ್ರೋಥ್ಯಾಲಸ್ ಎಂಬ ಹೆಸರೂ ಉಂಟು. ಇವು ಬಹಳ ಚಿಕ್ಕಗಾತ್ರದವು. ಹೃದಯಾಕಾರದಲ್ಲಿರುತ್ತವೆ. ಇವುಗಳಲ್ಲಿ ಸಂತಾನೋತ್ಪತ್ತಿ ಲೈಂಗಿಕರೀತಿಯಲ್ಲಿ ನಡೆಯುತ್ತದೆ. ಗ್ಯಾಮಿಟೊಫೈಟುಗಳಲ್ಲಿ ಹುಟ್ಟುವ ಲೈಂಗಿಕ ಕಣಗಳು ಪರಸ್ಪರ ಸಂಯೋಗವಾಗಿ ಯುಗ್ಮವನ್ನು ರೂಪಿಸುತ್ತವೆ. ಇದರಿಂದ ಸ್ಪೋರೋಫೈಟ್ ಉತ್ಪತ್ತಿಯಾಗುತ್ತದೆ. ಜರೀಗಿಡಗಳ ಜೀವನಚಕ್ರದಲ್ಲಿ ಈರೀತಿ ಗ್ಯಾಮಿಟೊಫೈಟ್ ಮತ್ತು ಸ್ಪೋರೋಫೈಟ್ ಎಂಬ ಎರಡು ವಿಭಿನ್ನರೀತಿಯ ಪೀಳಿಗೆಗಳನ್ನು ಕಾಣಬಹುದು. 

ಗ್ಯಾಮಿಟೊಫೈಟ್ ಲೈಂಗಿಕ ರೀತಿ ಸಂತಾನವೃದ್ಧಿ ಮಾಡುವ ಪೀಳಿಗೆ. ಇದು ಗಾತ್ರದಲ್ಲಿ ಅತಿ ಸಣ್ಣದು. ಸ್ಪೋರೋಫೈಟ್ ಎಂಬುದು ನಿಲಿಂಗರೀತಿಯಲ್ಲಿ ಸಂತಾನವೃದ್ಧಿ ನಡೆಸುವ ಪೀಳಿಗೆ; ಗಾತ್ರದಲ್ಲಿ ಅತಿ ದೊಡ್ಡದು. ಇದರಲ್ಲಿ ಶಾಕಾಪ್ರಜನನ ರೀತಿಯಿಂದ ವಂಶ ಅಭಿವೃದ್ಧಿಯಗುತ್ತದೆ. ಜರೀಗಿಡಗಳ ವರ್ಗೀಕರಣಕ್ಕೆ
(ನೋಡಿ- ಟೆರಿಡೊಫೈಟ)
(ಎಂ.ಸಿ.ಆರ್.)
(ಪರಿಷ್ಕರಣೆ : ಕೆ.ಬಿ.ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ